ನೀಲ ಏಡಿ - 
	ಆತ್ರ್ರಾಪೊಡ ವಿಭಾಗದ ಕ್ರಸ್ಟೇಸಿಯ ವರ್ಗ, ಡೆಕಾಪೊಡ ಗಣ, ಪೋರ್ಟುನಿಡೀ ಕುಟುಂಬಕ್ಕೆ ಸೇರಿದ ಏಡಿ (ಬ್ಲೂ ಕ್ರ್ಯಾಬ್). ನೀಲಿ ನಳ್ಳಿ ಪರ್ಯಾಯನಾಮ. ಕ್ಯಾಲಿನೆಕ್ಟಸ್ ಸ್ಯಾಪಿಡಸ್ ಇದರ ಶಾಸ್ತ್ರೀಯ ಹೆಸರು. ಚೆಸಾಫಿಕ್ ಕೊಲ್ಲಿ ಮತ್ತು ದ.ಅಟ್ಲಾಂಟಿಕ್ ಸಾಗರ ಇದರ ತೌರು. ನದೀಮುಖಜ ಭೂಮಿ ಹಾಗೂ ಸಿಹಿನೀರುವಾಸಿಗಳಾಗಿಯೂ ಬದುಕುವುದುಂಟು. ಬೇಸಿಗೆಯಲ್ಲಿ ಸಮುದ್ರತೀರಕ್ಕೆ ಸನಿಹದಲ್ಲಿದ್ದು, ಚಳಿಗಾಲದಲ್ಲಿ ಬಹು ಆಳಪ್ರದೇಶಕ್ಕೆ ತೆರಳುತ್ತದೆ. ಎರಡು ಕಣ್ಣುಗಳ ನಡುವೆ ಹಣೆಯಂಚಿನಲ್ಲಿರುವ ಎರಡು ಹಲ್ಲುಗಳೂ ಪೊರೆ ಬಿಡುವಾಗ ಪ್ರಸ್ಥಾನಪಾದಗಳ ಮೇಲೆ ಕಾಣುವ ವಿಶಿಷ್ಟ ಬಣ್ಣವೂ ಈ ಏಡಿಯ ಹೆಗ್ಗುರುತು. ಶಿರೋಕ್ಷಕ್ಕಿಂತ ಬಹು ಚಿಕ್ಕದಾದ ಇದರ ಉದರ ಯಾವಾಗಲೂ ಕವಚದಡಿಯಲ್ಲಿ ಮಡಿಚಿರುತ್ತದೆ. ಗಂಡು ಏಡಿಯಲ್ಲಿ ಎರಡು ಜೊತೆ, ಹೆಣ್ಣಿನಲ್ಲಿ ನಾಲ್ಕು ಜೊತೆ ಪ್ಲವಪಾದಗಳುಂಟು. ಗಂಡಿನ ಶಿರೋಕ್ಷ ಕವಚ ಸರಾಸರಿ 6 ಸೆಂ.ಮೀ. ಉದ್ದವೂ 15-18 ಸೆಂಮೀ ಅಗಲವೂ ಇದೆಯಾದರೂ ಹೆಣ್ಣಿನ ಕವಚ ಚಿಕ್ಕದು. ಇತರ ಏಡಿಗಳಂತೆ ನೀಲ ಏಡಿಯೂ ಸರ್ವಭಕ್ಷಿ; ಆದರೆ, ಕೊಳೆವ ಪ್ರಾಣಿಶೇಷ ಇದರ ಪ್ರಿಯ ಆಹಾರ. ಇದರ ಜೂಯಿಯಾ ಡಿಂಬಗಳು ದೈತ್ಯ ದ್ವಕಶಾಂಗಿಗಳನ್ನು (ಡೈನೋಪ್ಲಾಜಿಲೇಟ್) ಒದಗಿಸಿದರೆ ಮಾತ್ರ ಬದುಕಬಲ್ಲವು.

	ನೀಲಿ ಏಡಿ ಮೆದು ಮತ್ತು ಕಠಿಣ ಚರ್ಮಧಾರಿ. ಪೊರೆಬಿಟ್ಟ ಮೇಲೆ ಬೆಳೆಯುವ ಹೊಸ ಕವಚ ಕೆಲವು ಕಾಲದವರೆಗೆ  ಮೃದುವಾಗಿರುತ್ತದೆ. ಈ ಹಂತದಲ್ಲಿ ಇದನ್ನು ಮೆತುನಳ್ಳಿ ಎಂದು ಕರೆಯುತ್ತಾರೆ. ಈ ಏಡಿಗಳನ್ನು ಗಾಳದಿಂದ ಹಿಡಿದು, ಸಾಕಿ ಪೊರೆಬಿಟ್ಟ ಅನಂತರ ಮೈಮೆತುವಾಗಿರುವಾಗಲೇ ಮಾರುತ್ತಾರೆ. ಉದರದ ಒಳಾಂಗಗಳನ್ನು ತೆಗೆದ ಮೇಲೆ ಇಡೀ ದೇಹವನ್ನೇ ಬೇಯಿಸಿ ತಿನ್ನುವರು. ಪ್ರೌಢಾವಸ್ತೆಯನ್ನು ಮುಟ್ಟಿದ ಕೂಡಲೇ ಈ ಏಡಿಗಳಲ್ಲಿ ಪೊರೆ ಕಳಚುವಿಕೆ ನಿಂತು ಹೋಗುತ್ತದೆ.

	ನೀಲ ಏಡಿಯಲ್ಲಿ ಪ್ರಣಯಲೀಲೆಯನ್ನು ನೋಡಬಹುದು. ಗಂಡು ಏಡಿ ಹೆಣ್ಣಿನ ಮುಂದೆ ಮೊನೆಯುಗುರನ್ನು ಬಿಚ್ಚಿ, ಶರೀರವನ್ನು ಎತ್ತರಿಸಿ, ತೂಗಾಡುತ್ತ ನೃತ್ಯ ಪ್ರದರ್ಶಿಸುತ್ತದೆ. ಕೂಡುವುದಕ್ಕೆ ಮೊದಲು ಅಲಸಿ ಹೆಣ್ಣನ್ನು ಅನೇಕ ದಿನಗಳವರೆಗೆ ಗಂಡು ತನ್ನ ಅಧೋಭಾಗಕ್ಕೆ ಅಂಟಿಸಿಕೊಂಡಿರುತ್ತದೆ. ಆಳವಿಲ್ಲದ ನೀರಿನಲ್ಲಿ ಗಂಡು ಹೆಣ್ಣುಗಳು ಕೂಡುತ್ತವೆ. ಮೊಟ್ಟೆ ಇಡಲು ಹೆಣ್ಣು ಆಳವಾದ ನೀರಿಗೆ ವಲಸೆ ಹೋಗುತ್ತದೆ. ಪ್ರತಿ ಬೇಸಿಗೆಯಲ್ಲಿ ಇಡುವ ಸುಮಾರು 10,00,000-50,00,000 ಮೊಟ್ಟೆಗಳನ್ನು ಡಿಂಬೋತ್ಪತ್ತಿಯ ತನಕ ಉದರದ ತಳಭಾಗದಲ್ಲಿ ರಕ್ಷಿಸುತ್ತದೆ. ತತ್ತಿಯಿಂದ ಬಂದ ಡಿಂಬಗಳು ಪುನಃ ಸಮುದ್ರದ ಅಂಚಿಗೆ ಬರುತ್ತವೆ. ಇವು ಕಡಲ ತಡಿಯಲ್ಲಿ ನಡೆಯಲೂ ಬಲ್ಲವು, ಮೇಲ್ಮೈಯಲ್ಲಿ ಈಜಲೂ ಬಲ್ಲವು. ನಡೆಯುವಾಗ ಎಲ್ಲ ದಿಕ್ಕಿಗೂ, ಈಜುವಾಗ ಹಿಂದಕ್ಕೂ ಇಕ್ಕೆಡೆಗೂ ಚಲಿಸುತ್ತವೆ. ಸ್ವತಂತ್ರ ಜೀವಿಗಳಾದ ಡಿಂಬಗಳು ರೂಪಪರಿವರ್ತನೆಗೊಂಡು, ಪ್ರಬುದ್ಧಾವಸ್ಥೆಯನ್ನು ತಲಪಲು ಸುಮಾರು ಮೂರು ವರ್ಷ ಬೇಕಾಗುವುದು.
(ಎಸ್.ಎಚ್.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ